ಪಂಜಾಲ್ ಲಾವಾಸ್ತರಗಳು -
	ಕಾಶ್ಮೀರದ ಪೀರ್-ಪಂಜಾಲ್ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಜ್ವಾಲಾಮುಖಿಜ ಉತ್ಪನ್ನಗಳು, ಕಾರ್ಬಾನಿಫೆರಸ್ ಭೂಕಾಲದ ಮಧ್ಯಭಾಗದಲ್ಲಿ ಕಾಶ್ಮೀರದ ಬಲುಭಾಗ ನೆಲವಾಗಿತ್ತು.  ಆಗ ಅಲ್ಲಿ ತಲೆದೋರಿದ ಜ್ವಾಲಾಮುಖಿ ಚಟುವಟಿಕೆಯ ಪರಿಣಾಮವಾಗಿ ಮೊದಮೊದಲು ಅಗ್ನಿಪರ್ವತಗಳಿಂದ ಸಿಡಿದ ಶಿಲಾಚೂರುಗಳು ಅಗ್ಲಾರೇಟ್ ಸ್ಲೇಟ್ ಇಡುಗೆಗಳಾದುವು.  ಅವು ಸಾಮಾನ್ಯವಾಗಿ ಜೀವ್ಯವಶೇಷóರಹಿತವಾದವಾದರೂ ಐದಾರು ಕಡೆ ಅವುಗಳಲ್ಲಿ ಜೀವ್ಯವಶೇಷಗಳನ್ನು ಗುರುತಿಸಲಾಗಿದೆ.  ಈ ನಿಕ್ಷೇಪಗಳಾದ ಬಳಿಕ ಜ್ವಾಲಾಮುಖಿ ಚಟುವಟಿಕೆ ತೀವ್ರಗೊಂಡು ಪರ್ಮಿಯನ್ ಆದಿಯಲ್ಲಿ ಪರಾಕಾಷ್ಠೆಯನ್ನು ಮುಟ್ಟಿತು.  ಆಗ ಲಾವಾ ಪ್ರವಾಹಗಳು ಹೊರಬಂದು ಪದರುಪದರಾಗಿ ಹೆಪ್ಪುಗಟ್ಟಿದುವು.  ಜ್ವಾಲಾಮುಖಿ ಕಾರ್ಯಾಚರಣೆ ಕ್ರಮೇಣ ಕುಗ್ಗುತ್ತಹೋಗಿ ಟ್ರಯಾಸಿಕ್ ಅಂತ್ಯದಲ್ಲಿ ಕೊನೆಗೊಂಡಿತು.  ಈ ಲಾವಾಸ್ತರಗಳು ಜೀವ್ಯವಶೇಷಗಳುಳ್ಳ ನಾನಾ ವಯಸ್ಸಿನ ಜಲಜಶಿಲಾಪದರುಗಳೊಡನೆ ಕಂಡುಬಂದಿವೆ.  ಲಿಡಾರ್ ಕಣಿವೆಯಲ್ಲಿ ಕಾರ್ಬಾನಿಫೆರಸ್ ಆದಿಭಾಗದ ಶಿಲೆಗಳ ಮೇಲೆ ಹಾಗೂ ಮಧ್ಯ ಕಾರ್ಬಾನಿಫೆರಸ್ ಶಿಲೆಗಳೊಡನೆ ನಾಗಮಾರ್ಗದಲ್ಲಿ ಕಾರ್ಬಾನಿಫೆರಸ್ ಅಂತ್ಯದ ಶಿಲೆಗಳೊಡನೆ ಸೊನಾಮಾರ್ಗದಲ್ಲಿ ಪರ್ಮಿಯನ್ ಶಿಲೆಗಳೊಡನೆ ಮತ್ತು ವೂಲಾರ್ ಸರೋವರದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಟ್ರಯಸಿಕ್ಕಿನ ಆದಿ, ಮಧ್ಯ ಮತ್ತು ಅಂತ್ಯ ಕಾಲದ ಶಿಲೆಗಳೊಡನೆ ಕಂಡುಬಂದಿರುವುದು ಈ ಊಹೆಗೆ ಆಧಾರವಾಗಿದೆ.  ಇಲ್ಲಿ ಜ್ವಾಲಾಮುಖಿಯ ಚಟುವಟಿಕೆ ಭೂಕಾಲದ ದೀರ್ಘ ಕಾಲದತನಕ ಸತತವಾಗಿ ನಡೆದಿದೆಯಾದರೂ ಆ ನಿಕ್ಷೇಪಗಳ ಸಂಯೋಜನೆ ಅತ್ಯಾಶ್ಚರ್ಯಕರ ರೀತಿಯಲ್ಲಿ ಏಕ ಪ್ರಕಾರವಾಗಿ ಉಳಿದಿರುವುದು ಹೇಗೆ ಎಂಬುದು ಸಮಸ್ಯೆಯಾಗಿದೆ.  ಈ ಸ್ತರಗಳಲ್ಲಿ ಆಂಡಿಸೈಟಿನಿಂದ ಬಸಾಲ್ಟ್ ಬಗೆಯವರಿಗಿನ ಶಿಲೆಗಳಿವೆ.  ಅವು ಹಸಿರು, ನೇರಿಳೆ ಮತ್ತು ಕಪ್ಪು ಬಣ್ಣಗಳಲ್ಲಿವೆ.  ಅಲ್ಲಲ್ಲಿ ಅಮಿಗ್ಡಲಾಯಿಡಲ್ ಮತ್ತು ಪಾರ್ಫಿರಿಟಿಕ್ ಹೊರರಚನೆ ಕಂಡುಬರುವುವಾದರೂ ಸೂಕ್ಷ್ಮಸ್ಫಟಿಕ ಒಳರಚನೆ ಸಾಮಾನ್ಯ ಸ್ತರಗಳ ದಪ್ಪ 6 ರಿಂದ 9 ಮೀ. ವರೆಗೆ.  ಆದರೆ ಊರಿ ಜಿಲ್ಲೆಯಲ್ಲಿ ಅದರ ದಪ್ಪ 2100 ಮೀ.

	ಹೊರನೋಟಕ್ಕೆ ಅಬಾಧಿತವೆಂದು ಕಾಣುವ ಈ ಶಿಲೆಗಳ ತೆಳುಪೊರೆಯನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಮೂಲ ಪ್ರಮುಖ ಖನಿಜಗಳಾದ ಅಗೈಟ್ ಮತ್ತು ಪ್ಲೇಜಿಯೋಕ್ಲೇಸ್ ಗುರುತುಕಾಣದಷ್ಟು ಮಾರ್ಪಾಡಾಗಿರುವುದು ವ್ಯಕ್ತವಾಗುತ್ತದೆ.  ಅಸ್ಫಟಿಕ ಇಲ್ಲವೆ ಸೂಕ್ಷ್ಮ ಒಡಲಿನಲ್ಲಿದ್ದ ಈ ದೊಡ್ಡ ಹರಳುಗಳಲ್ಲಿ ಪ್ಲೇಜಿಯೋಕ್ಲೇಸ್ ಎಪಿಡೋಟ್ ಜೋಯಿಸೈಟ್ ಮತ್ತು ಕ್ಯಾಲ್‍ಸೈಟುಗಳಾಗಿ ಬದಲಾಗಿದ್ದರೆ ಮೊದಲೇ ಅನಿರ್ದಿಷ್ಟ ಆಕಾರದಲ್ಲಿದ್ದ ಅಗೈಟ್ ಎಪಿಡೋಟ್ ಅಥವಾ ಕ್ಲೋರೈಟ್ ಆಗಿದೆ.  ಇವುಗಳೊಡನೆ ಇಲ್ಮನೈಟ್ ಮತ್ತು ಮ್ಯಾಗ್ನಸೈಟುಗಳು ಉಪ ಖನಿಜಗಳಾಗಿ ದೊರೆಯುತ್ತವೆ.  ಒಡಲಿನ ಅಸ್ಫಟಿಕ ವಸ್ತು ಅಲ್ಲಲ್ಲಿ ಸ್ಫಟಿಕಾಂಕುರ ರಚನೆ ತೋರುತ್ತದೆ.  ಈ ಶಿಲೆಗಳು ಲಿಡಾರ್ ಕೊಳ್ಳ, ಬಾಸವಾರ್, ಕೊರಿಹಾರ್ ನಾಗಮಾರ್ಗ, ಜೋಯಿಲಾ, ಪೀರ್ಪಂಜಾಲ್, ಶಾಂತ ಅಭಾರಿ, ಗುರಾಮಿಸ್, ದೇವೀಘರ್, ರಂಜಾರಾ ಹಿಮಾಲಯ, ಚಿತ್ರಾಲ್, ಜಿಲ್ಜಿಟ್, ಕನ್ವಾರ್, ಮಂಡಿ, ಡಾಲ್‍ಹೌಸಿಗಳಲ್ಲಿ ಕಂಡುಬಂದಿವೆ.
(ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ